ಕಾರ್ಬೈಡುಗಳು

 ಇಂಗಾಲವು ಲೋಹಗಳೊಡನೆ ಮತ್ತು ತನಗಿಂತ ಹೆಚ್ಚು ಲೋಹ ಗುಣಗಳಿರುವ ಧಾತುಗಳೊಡನೆ ಸೇರಿ ಉಂಟಾದ ಸಂಯುಕ್ತಗಳು. ಉಕ್ಕಿಗೆ ಗಡುಸುತನವನ್ನು ಕೊಡುವ ಕಬ್ಬಿಣದ ಕಾರ್ಬೈಡ್, ವಜ್ರದ ಕಾಠಿನ್ಯಕ್ಕೆ ಸಮನಾಗಿರುವ ಸಿಲಿಕಾನ್ ಕಾರ್ಬೈಡ್, ಅತ್ಯಂತ ಗಡುಸುತನದ ಯಂತ್ರ ಮತ್ತು ಯಂತ್ರ ಭಾಗಗಳ ತಯಾರಿಕೆಗೆ ಬೇಕಾಗುವ ಟಂಗ್‍ಸ್ಟನ್ ಕಾರ್ಬೈಡ್, ಅಸಿಟಿಲೀನಿನ ತಯಾರಿಕೆಗೆ ಬೇಕಾಗುವ ಕ್ಯಾಲ್ಸಿಯಂ ಕಾರ್ಬೈಡ್,ಇವೆಲ್ಲವೂ ಈ ಗುಂಪಿಗೆ ಸೇರಿದವು. ಸಾಧಾರಣವಾಗಿ ಲೋಹದ ಅಥವಾ ಅದರ ಆಕ್ಸೈಡಿನ ಪುಡಿಯೊಂದಿಗೆ ಇಂಗಾಲವನ್ನು ಬೆರೆಸಿ ಹೆಚ್ಚು ಉಷ್ಣತೆಗೆ ಒಳಪಡಿಸುವುದರಿಂದ ಈ ರಸಾಯನ ವಸ್ತುಗಳನ್ನು ತಯಾರಿಸುತ್ತಾರೆ. ಅತಿ ಹೆಚ್ಚು ಉಷ್ಣತೆಯನ್ನು ತಡೆದಿಟ್ಟುಕೊಳ್ಳುವ ಮಫಲ್ ಒಲೆಯನ್ನು ಇವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಅಸಿಟಲೀನನ್ನು ಅಮೋನಿಯದಲ್ಲಿ ಕರಗಿದ ಲೋಹ ದ್ರಾವಣದಲ್ಲಿ ಹಾಯಿಸಿ ಅನಂತರ ಮತ್ತೆ ಕಾಸುವುದು ಇನ್ನೊಂದು ಮಾರ್ಗ, ಸೋಡಿಯಂ ಕಾರ್ಬೈಡಿನ ತಯಾರಿಕೆ ಇದಕ್ಕೆ ಉದಾಹರಣೆ. ಲೋಹದ ಉಪ್ಪುಗಳ ದ್ರಾವಣಗಳ ಮೂಲಕ ಅಸಿಟಲೀನನ್ನು ಹಾಯಿಸಿ ತಾಮ್ರ, ಬೆಳ್ಳಿ, ಬಂಗಾರ, ಕ್ಯಾಡ್ಮಿಯಂ ಮತ್ತು ಪಾದರಸಗಳ ಕಾರ್ಬೈಡುಗಳನ್ನು ತಯಾರಿಸುತ್ತಾರೆ. ಟಂಗ್‍ಸ್ಟನ್ ಲೋಹದ ಪುಡಿ ಮತ್ತು ಇದ್ದಲಿನ ಪುಡಿಯನ್ನು ಗ್ರಾಫೈಟಿನ ಮೂಸೆಯಲ್ಲಿ 1,400 ಸೆಂ. ವರೆಗೂ ಕಾಸುವುದರಿಂದ ಈ ಲೋಹದ ಕಾರ್ಬೈಡು ತಯಾರಾಗುವುದು. ಟ್ಯಾನ್ಟಲಂ ಕಾರ್ಬೈಡನ್ನು ತಯಾರಿಸಲು ಅದರ ಆಕ್ಸೈಡನ್ನು ಇಂಗಾಲದೊಂದಿಗೆ 2,000 ಸೆಂ. ವರೆಗೂ ಕಾಯಿಸಬೇಕು. ಕ್ಯಾಲ್ಸಿಯಂ ಕಾರ್ಬೈಡಿನ ತಯಾರಿಕೆಯೂ ಹೀಗೆಯೇ. ಅದರ ಆಕ್ಸೈಡು ಅಥವಾ ಕಾರ್ಬನೇಟನ್ನು ಇಂಗಾಲದೊಂದಿಗೆ ಬೆರೆಸಿ ವಿದ್ಯುತ್ ಒಲೆಯಲ್ಲಿ ಕಾಯಿಸಿ ಅದು ದ್ರವರೂಪದಲ್ಲಿ ಇರುವಾಗಲೇ ಬಗ್ಗಿಸಿ ಕೊಳ್ಳುತ್ತಾರೆ. ಉಳಿದೆಲ್ಲ ಕಾರ್ಬೈಡುಗಳ ತಯಾರಿಕೆಗೆ ಅವುಗಳ ಕರಗುವ ಬಿಂದುವಿಗಿಂತ ಕಡಿಮೆ ಉಷ್ಣತೆ ಸಾಕು. ಆದರೆ ಕ್ಯಾಲ್ಸಿಯಂ ಕಾರ್ಬೈಡು ಉಳಿದವುಗಳಂತಲ್ಲ.

 ಸಾಮಾನ್ಯವಾಗಿ ಕಾರ್ಬೈಡುಗಳು ಬಹಳ ಗಡುಸು ಮತ್ತು ಬಹು ಬೇಗನೆ ಒಡೆಯುವ ಹರಳುಗಳು. ಸಿಲಿಕಾನ್ ಮತ್ತು ಬೋರಾನ್ ಕಾರ್ಬೈಡುಗಳು ವಜ್ರದಷ್ಟು ಗಡಸು. ಕ್ರೋಮಿಯಂ ಕಾರ್ಬೈಡ್ ಟೊಪಾeóïನ ಮೇಲೆ ಗೀರು ಹಾಕುವಷ್ಟು ಗಡುಸು. ಇವುಗಳ ಕರಗುವ ಬಿಂದುಗಳು ಬಲು ಹೆಚ್ಚು. ಟ್ಯಾನ್ಟಲಂ ಕಾರ್ಬೈಡಿನ ಕರಗುವ ಬಿಂದು 4,150 ಸೆಂ. ನಮಗೆ ಗೊತ್ತಿರುವ ವಸ್ತುಗಳಲ್ಲಿ ಅತಿ ಹೆಚ್ಚಿನ ಕರಗುವ ಬಿಂದು ಇರುವ ರಾಸಾಯನಿಕ ವಸ್ತು ಇದೇ. ಈ ಕಾರ್ಬೈಡುಗಳ ಬಣ್ಣವೂ ವಿವಿಧ ರೀತಿಯವು. ಸಾಧಾರಣವಾಗಿ ಬೂದಿಯ ಬಣ್ಣ ಇದ್ದರೂ ಕ್ಯಾಲ್ಸಿಯಂ ಕಾರ್ಬೈಡು ಬಣ್ಣರಹಿತ ಹರಳು. ಅಲ್ಯೂಮಿನಿಯಂ ಕಾರ್ಬೈಡ್ ಅಚ್ಚ ಹಳದಿ. ಟಾನ್ಟಲಂ ಕಾರ್ಬೈಡ್ ಕಂದು ಬಣ್ಣ. ಸಿಲಿಕಾನ್ ಕಾರ್ಬೈಡಿಗೆ ಹೊಳೆಯುವ ತೆಳು, ಹಸಿರಿನಿಂದ ಹಿಡಿದು ಪಚ್ಚೆಯ ನೀಲ ವರೆಗಿನ ಬಣ್ಣವಿದೆ.

 ರಸಾಯನ ಗುಣಗಳ ದೃಷ್ಟಿಯಲ್ಲಿಯೂ ಇವುಗಳ ಗುಣ ವ್ಯತ್ಯಾಸ ಬಲು ಹೆಚ್ಚು. ಕೆಲವಂತೂ ಸಾಧಾರಣ ಪರಿಸ್ಥಿತಿಯಲ್ಲಿಯೂ ಸ್ಫೋಟಕಗಳು. ಆದರೆ ಕೆಲವು ಬಿಳಿಯ ಉಷ್ಣದಲ್ಲಿಯೂ ಸ್ಥಿರವಾಗಿರಬಲ್ಲವು. ಕ್ಯಾಲ್ಸಿಯಂ ಕಾರ್ಬೈಡನ್ನು ಒಡೆದು ಅಸಿಟಲೀನನ್ನು ಬಿಡುಗಡೆ ಮಾಡಲು ಬರೀ ನೀರು ಸಾಕು. ಕಬ್ಬಿಣದ ಕಾರ್ಬೈಡು ಹೈಡ್ರೋಕಾರ್ಬನುಗಳನ್ನು ಕೊಡಲು ದುರ್ಬಲ ಆಮ್ಲಗಳು ಬೇಕು. ಆದರೆ ಟ್ಯಾನ್ಟಲಂ ಕಾರ್ಬೈಡನ್ನು ಎಂಥ ಶಕ್ತಿಯುತ ಆಮ್ಲಗಳೂ ಏನೂ ಮಾಡಲಾರವು. ಹೈಡ್ರೋಪ್ಲೋರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲ ಎರಡೂ ಸೇರಿದಾಗ ಮಾತ್ರ ಎದುರಿಸಬಲ್ಲವು. ಸಿಲಿಕಾನ್ ಕಾರ್ಬೈಡಂತೂ ಇನ್ನೂ ಸ್ಥಿರ; ಅದನ್ನು 600 ಸೆಂ. ಉಷ್ಣತೆಯಲ್ಲಿಯೂ ಉತ್ಕರ್ಷಣ ಮಾಡಲು ಅಸಾಧ್ಯ.

(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ